Thursday, February 25, 2010

ಆ ದಿನಗಳು -- Sensational, fun filled flashback ( PART III)

ಈ ಸೀರಿಯಸ್ ಸ್ಟೋರಿ ಬಿಡಿ , ನಮ್ಮ ಹುಡುಗರು ಅಂದ್ರೆ ಈ ಪ್ರಸಾದ್, ನದೀಮ್ ಎಲ್ಲ ಯಾವಾಗ್ಲೂ ಹುಡುಗಿಯರ ಮುಂದೆ ಹೀರೋಗಿರಿ ಮಾಡೋಕೆ ಚಾನ್ಸ್ ಸಿಗುತ್ತಾ ಅಂತ ಹುಡೋಕೋ ಜನ . ಅವೊತ್ತೊಂದಿನ ಎಲ್ಲರೂ ಕಾಲೇಜ್ ಬಸ್ನಲ್ಲಿ ಕುಳಿತುಕೊಂಡಿದ್ದರು . ಮನೆಗೆ ಹೋಗೋ ಟೈಮ್ , ಕಾಲೇಜ್ ಬಸ್ ಬಿಡೋಕೆ ಇನ್ನು ಸ್ವಲ್ಪ ಟೈಮ್ ಇದ್ದಿದ್ರಿಂದ ಹುಡುಗರು ಬಸ್ ಕೆಳಗಡೆ ಸ್ವಲ್ಪ ದೂರದಲ್ಲಿ ನಿಂತಿದ್ರು, ಡ್ರೈವರ್ ಟೀ ಕುಡಿಯಕ್ಕೆ ಅಂತ ಕಾಲೇಜ್ ಕ್ಯಾಂಟೀನ್ ಗೆ ಹೋಗಿದ್ದ ಏನೋ. ಹುಡುಗಿಯರು ಬಸ್ ನಲ್ಲಿ ಕುಳಿತುಕೊಂಡಿದ್ದರು . ಅದೇನಯ್ತೋ ಗೊತ್ತಿಲ್ಲ , ಬಸ್ ಹಾಗೆ ಮುಂದಕ್ಕೆ ಹೋಗೋಕೆ ಸ್ಟಾರ್ಟ್ ಆಯಿತು . ಆಗ ನಮ್ಮ friend ನದೀಮ್ , ತಾನು ಹೀರೋ ಅಂತ ಹುಡುಗಿಯರ ಮುಂದೆ ತೋರಿಸೋ ಇಂತ ಚಾನ್ಸ್ ಯಾವಾಗಲು ಮಿಸ್ ಮಡ್ಕೊತಿರ್ಲಿಲ್ಲ . ಹಾಗೆ ಬಸ್ ಕಡೆಗೆ ಬಸ್ ನಿಲ್ಲಿಸೋಣ ಅಂತ ಓಡಿದ. ಉಳಿದ ಎಲ್ಲ ಹುಡುಗರಿಗೆ ಇನ್ನೇನು unnecessarily ನದೀಮ್ ಎಲ್ಲ ಹುಡುಗಿಯರ ಮುಂದೆ ಹೀರೋ ಆಗಿ ಬಿಡ್ತಾನೆ ಅಂತ ಹೊಟ್ಟೆಕಿಚ್ಚು .
ಆದ್ರೆ ಪಾಪ ಇನ್ನೇನು ನದೀಮ್ ಡ್ರೈವರ್ ಸೀಟ್ಗೆ ಹತ್ತಬೇಕು ಅನ್ನೋವಾಗ್ ಬಸ್ ತನ್ನ ತಾನೇ ನಿಂತು ಬಿಟ್ಟಿತು . ಎಲ್ಲ ಹುಡುಗಿಯರು ಹಾಗೂ ಹುಡುಗರು ಹೋ ಅಂತ ನಕ್ಕಾಗ್ ನಮ್ಮ ನದೀಮ್ ಗೆ ಬಸ್ ಮೇಲೆ ಕೋಪ . ನಮ್ಮ ಹುಡುಗರಿಗೆ ಖುಷಿಯೋ ಖುಷಿ .
ಹೀಗೆ ಎಸ್ಟೊಂದು ಸ್ಟೋರಿ , ಎಸ್ಟೊಂದು ಮಜವಾದ್ ಘಟನೆಗಳು . ಇನ್ನೊಂದು ಘಟನೆ ಅಂದ್ರೆ ನಮ್ಮ ನಂದಕುಮಾರ ದು . ಇವನು ನಮ್ಮ ಗ್ಯಾಂಗದಲ್ಲಿರೋ ಜಗ್ಗೇಶ್ , ತುಂಬಾ funny character . ಕಾಲೇಜ್ mismatch Day ದಲ್ಲಿ spiderman ಥರ ಬಣ್ಣ ಬಣ್ಣದಾ underwear ನಾ ಪ್ಯಾಂಟ್ ಮೇಲೆ ಹಾಕಿಕೊಂಡ ಬಂದ ಧೀರ ಇವನು .ಆ ದಿನ ನಮ್ಮ ಜೊತೆ ತಿರುಗುವಾಗ್ ಪೂರ್ತಿ ಕಾಲೇಜ್ ಗೆ ಕಾಲೇಜ್ ಬಿದ್ದು ಬಿದ್ದು ನಗ್ತಾ ಇತ್ತು . ನಮ್ಮ ಕ್ಲಾಸ್ ಕ್ರಿಕೆಟ್ ಟೀಮ್ನಲ್ಲಿ ಇವನ ಜೊತೆ ಬ್ಯಾಟಿಂಗೆ ಹೋಗಲು ಯಾರು ರೆಡಿ ಇರ್ತಿರ್ಲಿಲ್ಲ . ಯಾಕೆಂದರೆ ಒಂದು ಸಲ ನಮ್ಮ ಕ್ಲಾಸ್ ಟೀಂ ಗು ಹಾಗು MCA class ಟೀಂಗು ಕ್ರಿಕೆಟ್ ಮ್ಯಾಚ್ ಇತ್ತು . ಮೊದಲು ಬ್ಯಾಟಿಂಗ ನಲ್ಲಿ ಇವನು ಹಾಗು ಶಿವ ( ನಮ್ಮ ಇನ್ನೊಬ್ಬ ಫ್ರೆಂಡ್) ಹೋದರು . ಶಿವ ನಮ್ಮ ಟೀಂ ನ ಅತ್ಯುತ್ತಮ ಬ್ಯಾಟ್ಸ್ಮನ್ . ಹೀಗೆ ಆಡಬೇಕಾದ್ರೆ ನಮ್ಮ ನಂದು ಗೆ ಸುಮ್ಮನೆ ಕೂಗೋ ಅಭ್ಯಾಸ್ . ನಂದಕುಮಾರ್ ದ ಬ್ಯಾಟ್ಟಿಂಗ್ ಇತ್ತು , ಇವನು ಒಂದು ಬಾಲ್ ಹೊಡೆದು " 2 2 run " ಅಂತ ಕೂಗಿದಾಗ , ಶಿವ ಆಕಡೆ ಇಂದ 2 ರನ್ ಗೊಸ್ಕರ್ ಓಡಿ ಬಂದ್ರೆ , ಇವನು ಇಲ್ಲೇ ನಿಂತ್ಕೊಂಡಿರಬೇಕಾ ? ಶಿವ ರನ್ ಔಟ್ ಆಗಿಬಿಟ್ಟ . ಅವನಿಗೆ ಎಲ್ಲಿ ಇಲ್ಲದ ಕೋಪ ಇವನ ಮೇಲೆ . ಇವನು ಮಾತ್ರ ಏನು ಆಗಿಲ್ಲ ಅನ್ನೋ ಹಾಗೆ ನಿಂತ್ಕೊಡಿದ್ದ ನೋಡಿ ಶಿವ ಗೆ ಇನ್ನಸ್ಟು ಕೋಪಾ ನೆತ್ತೀಗೇರಿತು .ಆಗ ಶಿವ ಇವನಿಗೆ " ಮಗ ಓಡೋದು ಇರ್ಲಿಲ್ಲ ಅಂದ್ರೆ ಸುಮ್ಮನೆ ಯಾಕೆ 2 2 ರನ್ ಅಂತ ಕೂಗೊಂಡೆ ಅಂದ್ರೆ . ಇವನು " ನಾನು ನಿಂಗೆ 6 , 6 ಅಂತ ಕೂಗಿದರೆ 6 ರನ್ ಓಡಿ ಬರ್ತಿದ್ದಿಯಾ , ಬಾಲ್ ಎಲ್ಲಿದೆ ಅಂತ ನೋಡೋಕಾಗೊಲ್ವ ?" ಅಂತ ಅನ್ನುಬೇಕೇ :D
ಅವಗಿಂದ ಇವನಿಗೆ ಎಲ್ಲರು " ಮಗ 2 2 22 22 2 ( ಟೂ ಟೂ ಟೂ ) " ಅಂತಾನೆ ಕಾಡೋದು . ಮೊನ್ನೆ ಎಲ್ಲರೂ ಮತ್ತೆ get together ಆದಾಗ ಇವನಿಗೆ ಟೂ ಟೂ ಟೂ ಅಂತಾ ಕಾಡಿದ್ದೆ ಕಾಡಿದ್ದು . ಇವಾಗಲು ಅವನು ಹಾಗೇ ಇದ್ದಾನೆ.ಅದಕೊಂದು ಊದಾಹರಣೆ ಏನು ಅಂದ್ರೆ , ಮೊನ್ನೆ ಸಿಕ್ಕಾಗ್ ಗೊತ್ತಾಯ್ತು ಅವನು ಒಂದು ದೊಡ್ಡ ಸಾಫ್ಟ್ವೇರ್ ಕಂಪನಿಯಾ ಆಫರ್ ತಿರಸ್ಕರಿಸಿದ ಅಂತೆ . ಯಾಕೆಂದರೆ ಆ ಕಂಪನಿಯ ಕಾರ್ ಪಾರ್ಕಿಂಗ್ ಸರಿ ಇರ್ಲಿಲ್ಲ ಅಂದಾಗ್ ನಾವೆಲ್ಲಾ ನಕ್ಕು ನಕ್ಕು ಸಾಕಾಯ್ತು . ಆಫರ್ ತಿರಸ್ಕರಿಸೋಕೆ ಸುಮಾರು ಕಾರಣಗಳನ್ನ ಕೇಳಿದ್ವಿ ಆದ್ರೆ ಈ ಥರ ಕಾರಣ ನಮ್ಮ ನಂದಕುಮಾರ ನೆ ಕೊಡಲಿಕ್ಕೆ ಸಾದ್ಯ .
ಹೇಗಿದ್ರು ನಮ್ಮ ಫ್ರೆಂಡ್ಸ್ . ಆ ದಿನಗಳು ಎಂತ ದಿನಗಳು , ಎಸ್ಟೊಂದು " carefree, irresponsible, and immature" . ನಮ್ಮ ಹತ್ರ ದುಡ್ಡು ಬಿಟ್ಟು ಎಲ್ಲ ಇತ್ತು .ಗೆಳೆಯರಿದ್ದರು , ಟೈಮ್ ಇತ್ತು , ಆ ಜೋಶ ಇತ್ತು . ಆದ್ರೆ ಒಂದು ಖುಷಿ ಅಂದ್ರೆ ನಮಗೆ ಸಿಕ್ಕ ಕಾಲೇಜ್ ದಿನಗಳ ಅವಕಾಶವನ್ನು ನಾವು ಕಳಿದುಕೊಳ್ಳಲಿಲ್ಲ. ಈ ಎಲ್ಲದರಲ್ಲಿ ನಮಗೆ ಗೊತ್ತಿಲ್ದ ಹಾಗೆ ನಾನು ಮತ್ತು ಪ್ರಸಾದ್ ಒಬ್ಬರನ ಒಬ್ಬರು ಇಷ್ಟಪಡಲಿಕ್ಕೆ ಶುರು ಮಾಡಿದಿವಿ . ಪ್ರೀತಿ ನಮಗೆ ಹೇಳದೆ ಕೇಳದೆ ನಮ್ಮಿಬ್ಬರ ನಡುವೆ ಬೆಳಿಲಿಕ್ಕೆ ಶುರುವಾಗಿತ್ತು , ಅದು ನಮ್ಮ ಹೃದಯದಲ್ಲಿ , ಜೀವನದಲ್ಲಿ ಒಂದು ಜಾಗವನ್ನ ಅವರಿಸಿಕೊಳ್ಳಲಿಕ್ಕೆ ಶುರು ಮಾಡಿತ್ತು . ನಮ್ಮಿಬ್ಬರಿಗೆ ಇನ್ನು ವರೆಗೆ ಗೊತ್ತಾಗಿಲ್ಲ ಈ ಪ್ರೀತಿ ಯಾವಾಗ್ ಎಲ್ಲಿಂದ ಶುರುವಾಯಿತು ಅಂತ . ನಮಗೆ ಗೊತ್ತಿಲ್ಲದೇ ನಾವು ಬೆಸ್ಟ್ ಫ್ರೆಂಡ್ಸ್ ದಿಂದ ಪ್ರೇಮಿಗಳಾಗಿ ಬಿಟ್ಟಿದ್ವಿ . ಆ ದಿನಗಳು ನಮ್ಮಿಬ್ಬರ ಜೀವನದಲ್ಲಿ ಕಳೆದ ಅತ್ಯದ್ಭುತ್ ಕ್ಷಣಗಳು . ನಾವು ಯಾವಾಗಲು ಆ ಕ್ಷಣಗಳನ್ನ ತಾಜಾ ಇಡಕ್ಕೆ ಪ್ರಯತ್ನಿಸುತ್ತಾನೆ ಇರ್ತವಿ . ಅದಕ್ಕೆ ಏನೋ ಇನ್ನು ವರೆಗೂ ಬರಿ ಫ್ರೆಂಡ್ಸ್ ಥರ " ಹೋಗೋ ಬಾರೋ ಅಂತ " ನಾ ಕರಿದ್ರೆ (ನಮ್ಮ ಅತ್ತೆ , ಮಾವ ಹಾಗೂ ಹಿರಿಯರ ಎದುರು ಬಿಟ್ಟು) , ಪ್ರಸಾದ್ ನನ್ನನ ಹೆಂಡತಿ ಅಂತಾನೆ ಮರೆತು " ಆ ಹುಡುಗಿ ನೋಡು ನನ್ನ ನೋಡ್ತಾ ಇದ್ದಾಳೆ , ಈ ಹುಡುಗಿ ನೋಡು ನಂಗೆ ಲೈನ್ ಕೊಡ್ತಾ ಇದ್ದಾಳೆ " ಅಂತ ಕಾಲೇಜ್ ಹುಡುಗನ ಥರ ಆಡ್ತಾನೆ .
ಓ ದೇವರೇ "seriously give me another chance to grow up once again :)"
ನಂಗೆ ಮತ್ತೆ ಆ ಕಾಲೇಜ್ ದಿನಗಳಿಗೆ ಕಳುಹಿಸಿ ಬಿಡು .
ನಂಗೆ ಮತ್ತೆ ನನ್ನ ಫ್ರೆಂಡ್ಸ್ ಜೊತೆ parties ಮಾಡ್ಬೇಕು ,
ನಂಗೆ ಮತ್ತೆ ನನ್ನ ಫ್ರೆಂಡ್ಸ್ ಜೊತೆ ಕೂಡಿ mass bunk ಮಾಡಿ ಸಿನೆಮಾಗೆ ಹೋಗ್ಬೇಕು .
ನಂಗೆ ಮತ್ತೆ ನನ್ನ ಬೆಸ್ಟ್ ಫ್ರೆಂಡ್ ಜೊತೆ ಅದೇ ಥರ ಜಗಳ ಆಡಬೇಕು ಮತ್ತು ಅದೇ ಥರ emotional ರೀತಿಯಿಂದ reunion ಆಗ್ಬೇಕು .
ನಂಗೆ ಮತ್ತೆ ನನ್ನ ಫ್ರೆಂಡ್ಸ್ ಜೊತೆ ಕೂಡಿ ರಾತ್ರಿ ಎಲ್ಲ combined ಸ್ಟಡಿ ಮಾಡಿ ಬರಿ passing marks ತೆಗಿಬೇಕು .
ನಂಗೆ ಮತ್ತೆ ನನ್ನ ಫ್ರೆಂಡ್ಸ್ ಜೊತೆ ಕೂಡಿ ಕೊನೆ ಕ್ಷಣದಲ್ಲಿ ಇಲ್ಲಿ ಅಲ್ಲಿ ಓಡಾಡಿ , ಕೊನೆ ಕ್ಷಣದ notes (taken by studious students ;)) ಕಾಪಿ ಮಾಡ್ಕೊಬೇಕು .
ನಂಗೆ ಮತ್ತೆ ನನ್ನ ಫ್ರೆಂಡ್ಸ್ ಜೊತೆ ಕೂಡಿ ಕೊನೆ ಗಳಿಗೆಯ submission ಗೆ ಒಂದೇ ಪ್ರೊಗ್ರಾಮ ದ 10 print ತೆಗಿಬೇಕು ( Again thanks to those studious student for dedicating their life for only studies and writing those ಪ್ರೊಗ್ರಮ್ಸ್) ಇಲ್ಲ ಅಂದ್ರೆ ಈ ರೀತಿ ಎಂಜಾಯ್ ಮಾಡಿ ಕೊನೆ ಗಳಿಗೇಲಿ ಅಸ್ತು ಒಳ್ಳೆ ಪ್ರೊಗ್ರಾಮ್ ನಮ್ಮ ಹತ್ರ ಎಲ್ಲಿ ಬರಿಲಿಕ್ಕೆ ಸಾದ್ಯ ಆಗ್ತಿತ್ತು
ಪರೀಕ್ಷೆಗೆ ಇನ್ನು ತುಂಬಾ ಸಮಯ ಇದೆ ಅಂತ revision ಗೆ ಸಾಕಷ್ಟು ಸಮಯ ಇಟ್ಟು, ಆ ಪರೀಕ್ಷೆಗೆ ಓದೋ ಟೈಮ್ ಟೇಬಲ್ ನಾ ಇನ್ನೊಂದು ಸಲ ಹಾಕ್ಬೇಕು ಅನ್ನಿಸ್ತಾ ಇದೆ . ಮತ್ತೆ ಆ ಟೈಮ್ ಟೇಬಲ್ ನಲ್ಲಿರೋ ಬರಿ " relax , tea, lunch and dinner " ವೇಳೆಗಳನಸ್ಟೆ ನಿಯತ್ತಾಗಿ ಪಾಲಿಸಿ , ಓದೋಕೆ ಅಂತ ನಿಗದಿ ಪಡಿಸಿದ ವೇಳೆಯಲ್ಲಿ ಮತ್ತೆ ಹಾಸ್ಟೆಲ್ ಫ್ರೆಂಡ್ಸ್ ಜೊತೆ ಗಾಸ್ಸಿಪ್ ನಲ್ಲಿ ಇನ್ನೊಂದು ಸಲ ಕಳಿಬೇಕು ಅಂತ ಅನ್ನಿಸ್ತಾ ಇದೆ .
ಇಸ್ಟೆಲ್ಲಾ ಗದ್ದಲದಲ್ಲಿ ಪರೀಕ್ಷೆಗೆ ಇನ್ನು ಬರಿ ೨ ದಿನ ಇದೆ , ಆದ್ರೆ ಏನು ಓದಿಲ್ಲ ಅನ್ನೋ ಟೆನ್ಶನ್ ಇನ್ನೊಮ್ಮೆ ಫೀಲ್ ಮಾಡ್ಕೋ ಬೇಕು ಅನ್ನಿಸ್ತಾ ಇದೆ . ಬರಿ ಪಾಸ್ ಆದ್ರೆ ಸಾಕಪ್ಪ ಅಂತ , ಬರಿ important ಪಾಠಗಳನ್ನ ಅಸ್ಟೆ ಇನ್ನೊಂದು ಸಲ ಓದ್ಕೋ ಬೇಕು ಅಂತ ಅನ್ನಿಸ್ತಾ ಇದೆ .
ನನ್ನ ಹಾಸ್ಟೆಲ್ ಹುಡುಗಿಯರ ಜೊತೆ ಇನ್ನೊಂದು ಸಲ ರಾತ್ರಿ ಎಲ್ಲ ಕುಳಿತು ಬರಿ ಹುಡುಗರ ವಿಷಯಗಳ್ಳನ್ನ ಮಾತಾಡಬೇಕು ಅಂತ ಅನ್ನಿಸ್ತಾ ಇದೆ , ರಾತ್ರಿ ೩-೪ ಕ್ಕೆ ಚಾ ಮಾಡಿ ಬರಿ ಗಾಸ್ಸಿಪ್ ವಿಷಯಗಲ್ಲನ್ನೇ ಮಾತಾಡ್ಬೇಕು ಅನ್ನಿಸ್ತಾ ಇದೆ
ಮತ್ತೊಂದು ಸಲ ಈ ಜಗತ್ತೇ ನನ್ನದು ಅಂತ ಫೀಲ್ ಮಾಡ್ಕೋ ಬೇಕು ಅನ್ನಿಸ್ತಾ ಇದೆ

" Please GOD give me another chance :)."

This post is dedicated to all my college friends . LOVE YOU ALL.

ಬರಿ ಓದಿ ಹೆಚ್ಚಿನ ಅಂಕಗಳನ್ನಾ ತೆಗಿದರೆ ಮಾತ್ರ ನಾವು ಜೀವನದಲ್ಲಿ ಎನಾದ್ರು ಸಾಧಿಸ್ತಿವಿ ಅನ್ನೊ ಮಾತನ್ನ ಸುಳ್ಳು ಮಾಡಿದವರು ನಾವು . ಇವಾಗ ನಾವೆಲ್ಲರೂ ಜಗತ್ತಿನ ದೊಡ್ಡ ದೊಡ್ಡ ಸಾಫ್ಟ್ವೇರ್ ಕಂಪನಿಗಳಲ್ಲಿ ಒಳ್ಳೆ ಹುದ್ದೆ ಅಲಂಕರಿಸಿದ್ದೇವೆ , ಒಳ್ಳೆ ಅಂಕಿಣಾ ವೇತನ ಪಡಿತಾ ಇದ್ದಿವಿ . ಇದೆಕೆಲ್ಲ ಕಾರಣ ನಾವು ಕಳೆದ ಆ positive attitude ನಾ , positive energy ಯಾ lively , ಜೋಶಿಲ ಕಾಲೇಜ್ ದಿನಗಳೇ ಇರಬಹುದೇ ?

(ಸಶೇಷ)

ಆ ದಿನಗಳು -- Sensational, fun filled flashback ( PART II)

ಇನ್ನೊಂದು ನಂಗೆ ಮರಿಯಲಾಗದ ಘಟನೆ ಅಂದ್ರೆ ನಮ್ಮ HOD ಪ್ರಸಾದನ(ನನ್ನ ಪತೀ ದೇವರು) ಕಾಪಿ chit ಕೊಡುವಾಗ್ ಹಿಡಿದ್ದಿದು . ಪ್ರಸಾದ್ ಯಾರಿಗೋ ಕಾಪಿ chit ಕೊಡ್ಬೇಕಾದ್ರೆ HOD ಹತ್ರ ಸಿಕ್ಕಿ ಬಿದ್ದ ಅಂತ ಆಮೇಲೆ ಗೊತ್ತಾದ್ರು , ಅದು ಯಾರಿಗೆ ಅಂತ ಗೊತ್ತೇ ಇರ್ಲಿಲ್ಲ , ಅದು ನಂಗೆ ಕೊಡೋಕೆ ಟ್ರೈ ಮಾಡಿದಾಗ್ ಸಿಕ್ಕಿ ಬಿದ್ದಿದ ಅಂತ ಆಮೇಲೆ ಕೇಳಿದಾಗ್ , ಅವನ್ ಮೇಲೆ ಇನ್ನು ಪ್ರೀತಿ ಸಿಕ್ಕಾಪಟ್ಟೆ ಜಾಸ್ತಿ ಆಯಿತು . ಈ ಘಟನೆ ನಡಿದಾಗ್ ನಾನು ಮತ್ತು ಪ್ರಸಾದ್ ಬರೀ ಕಿತ್ತಾಡೋ ಬೆಸ್ಟ್ ಫ್ರೆಂಡ್ಸ್ ಆಗಿದ್ವಿ ಅಸ್ಟೆ, ಅದ್ಯಾಕೆ ನನಗೋಸ್ಕರ ಅಸ್ಟೊಂದು ರಿಸ್ಕ ತೊಗೊಂಡ ಅಂತ ಅಮೇಲೆ ಗೊತ್ತಾಯಿತು. ಆದ್ರೆ ಅವನು ಇನ್ನು ವರೆಗೂ ನಾನೆ ಅವನ ಹಿಂದೆ ಬಿದ್ದಿದ್ದೆ ಅಂತಾನೆ ವಾದಿಸೊದು.ಯಾರು ಯಾರ ಹಿಂದೆ ಇದ್ದರು ಅನ್ನೋ ಭಿನ್ನಾಭಿಪ್ರಾಯ ನಮ್ಮಲ್ಲಿ ಇನ್ನು ಇದೆ :) . ಅದೆನಾಗಿತ್ತು ಅಂದ್ರೆ ಅವೊತ್ತು ನಂಗೆ " C ಪ್ರೊಗ್ರಾಮ್" ಲ್ಯಾಬ್ exam ಇತ್ತು . ನನ್ನ ಕರ್ಮಕ್ಕೆ ನಂಗೆ ಯಾವ್ ಪ್ರೊಗ್ರಾಮ್ ಅಂದ್ರೆ ಅಲರ್ಜಿ ಇತ್ತೋ ಅದೇ ಪ್ರೊಗ್ರಾಮ್ ಬಂದಬಿಟ್ಟಿತು. ನನ್ನ ದುರ್ದೈವಕ್ಕೆ ನಾನು ಆ ಒಂದು ಪ್ರೊಗ್ರಾಮ್ ಬಿಟ್ಟು ಮಿಕ್ಕಿದೆಲ್ಲ ಪ್ರೊಗ್ರಾಮ್ ಪ್ರಾಕ್ಟೀಸ್ ಮಾಡಿದ್ದೆ . . ಅದೇನೋ ಅಂತಾರಲ್ಲ ಪಾತಳ್ಕ್ಕೆ ಹೋದರು ಶನಿ ಬೆನ್ನು ಬಿಡಲ್ಲ ಅಂತ , ಆ ಪ್ರೊಗ್ರಾಮ್ ನನ್ನ ಬೆನ್ನು ಬಿಟ್ಟಿರಲಿಲ್ಲ .
ನಂಗೆ ೧೦೦% ಗೊತ್ತಿತ್ತು ನಾನು ಸತ್ರು ಆ ಪ್ರೊಗ್ರಾಮ್ ಬರಿಲಿಕ್ಕೆ ಆಗಲ್ಲ ಅಂತ . ನಂಗ ಆ ಪ್ರೊಗ್ರಾಮ್ ತಳ ಬುಡ ಗೊತ್ತಿರ್ಲಿಲ್ಲ , ಇನ್ನು ಕಾನ್ಸೆಪ್ಟ್ ಅಂತು ಏನೇನೊ ಗೊತ್ತಿರ್ಲಿಲ್ಲ . ಪ್ರೊಗ್ರಾಮ್ ಬರಿಯೋದು ಕಷ್ಟ ಅಸ್ಟೆ ಅಲ್ಲ , ಅದು ಅಸಾಧ್ಯವಾದ ಮಾತು ಅಂಥ ಗ್ಯಾರಂಟಿ ಆಗಿಬಿಟ್ಟಿತು. ಆಗ ಕರ್ನಾಟಕ university ಒಂದು ರೂಲ್ ಇತ್ತು . ನಮಗೆ ಪರಿಕ್ಷೆದಲ್ಲಿ ಯಾವದದ್ರು ಪ್ರೊಗ್ರಾಮ್ ಬರಲಿಲ್ಲ ಅಂದ್ರೆ , ಅದರ ಬದಲಾಗಿ ಇನ್ನೊಂದು ಪ್ರೊಗ್ರಾಮ್ exchange ತೊಗೊಬಹುದಗಿತ್ತು , ಅದ್ರ ಹಾಗೆ ಮಾಡಿದ್ರ 50% ಮಾರ್ಕ್ಸ್ ಕಟ್ಟ ಆಗ್ತಾ ಇತ್ತು . ಕಡಿಗೆ ಇನ್ನೇನು ದಾರಿ ಕಾಣದೆ , ಅದೊಂದೇ ದಾರಿ ಅಂತ ನಮ್ಮ HOD ( Internal Examiner) ಹತ್ರ ಹೋಗಿ ನಾನು " ಸರ್ , ನಂಗ ಈ ಪ್ರೊಗ್ರಾಮ್ ಬರಾಂಗಿಲ್ಲರೀ , ನಂಗ್ ಬ್ಯಾರೆ ಪ್ರೊಗ್ರಾಮ್ ಕೊಡ್ರಿ " ಅಂತ ಕೇಳಿದ್ರ ಅದಕ್ಕ ಅವರು " ನೀ ಟ್ರೈ ಮಾಡ , ನಿಂಗ್ ಈ ಪ್ರೊಗ್ರಾಮ್ ಬಂದ ಬರತೈತಿ , ಯಾಕ ವಿನಾಕಾರಣ 50 ಮಾರ್ಕ್ಸ್ ಕಟ್ಟ ಮಾಡಿಸ್ಕೋ ಕೆಲಸ ಮಾಡಾತಿ" ಅಂದ್ರು . ಇನ್ನ ಅವರಿಗೆ ಹೆಂಗ ಹೇಳ್ಬೇಕು ಅಂತಾನೆ ಗೊತ್ತಾಗ್ಲಿಲ್ಲ . ಮತ್ತೆ ವಾಪಾಸ್ ಬಂದು ನನ್ನ ಸೀಟ್ ನಲ್ಲಿ ಕುಳಿತೆ . ಎಲ್ಲಾ ನನ್ನ ಜೋಡಿಯವರು ಪ್ರೊಗ್ರಾಮ್ ಬರಿದು execute ಮಾಡಿ ಹೊರಗೂ ಹೊಂಟಿದ್ದು ನೋಡಿ ನಂಗೆ ಫುಲ್ tension .

ಆಕಡೆ ಪ್ರಸಾದಗೆ ಯಾರೋ ನನ್ನ ಅವಸ್ಥೆ ಬಗ್ಗೆ ಹೇಳಿದರಂತೆ . ಅವನಿಗೆ ಆ ದಿನ ಲ್ಯಾಬ್ ಇರ್ಲಿಲ್ಲ . ಅವಾಗ ಇವನು ನಂಗೆ ಹೇಗಾದರು ಮಾಡಿ ಆ ಪ್ರೊಗ್ರಾಮ್ ಕಾಪಿ ಕಳಿಸಬೇಕು ಅಂತ ಅಲ್ಲೇ ಪಕ್ಕದಲ್ಲಿರೋ ಕ್ಲಾಸ್ಸನಲ್ಲಿ ಕುಳಿತು ಆ ಪ್ರೊಗ್ರಾಮ್ ಬರಿತ ಇದ್ದ ಅಂತೆ . ಅವಾಗ ನಮ್ಮ HOD ಅಲ್ಲಿ ಹೋಗಿ ಅವನ್ನ ಹಿಡಿದು ಕೇಳಿದರಂತೆ " ಏ ಪ್ರಸಾದ್ ಇಲ್ಲಿ ಏನ್ ಮಾಡತಿ " ಅಂದಾಗ , ಪ್ರಸಾದ್ ನಮ್ಮ HOD ಗೆ " ಸರ್ ನಾಳೆ C exam ಐತ್ರಿ , ಅದಕ್ಕ ಪ್ರಾಕ್ಟೀಸ್ ಮಾಡಾತೇನ " ಅಂದ ಅಂತೆ . ಅವಾಗ ನಮ್ಮ HOD ಪೇಪರ್ ತೊಗೊಂಡು ನೋಡಿದ್ರ ಪೆಪರ ಮೂಲೆಯಲ್ಲಿ ಸಾಸಿವೆ ಕಾಳಿನಸ್ಟು ಅಕ್ಷರಗಳನ್ನ ನೋಡಿ "ಇಸ್ಟ್ಯಾಕ ಸನ್ನು ಸನ್ನು ಅಕ್ಷರದಾಗ್ ಬರ್ಯಾಕತ್ತಿ" ಅಂದ್ರ ಅಂತೆ , ಇವನು " ಸರ್ ಪೇಪರ್ ಇಲ್ಲಾರಿ , ಅದಕ್ಕ ಇದ್ದಿದ್ರಾಗ ಅಡ್ಜಸ್ಟ್ ಮಾಡ್ಕೊಂಡ್ ಪ್ರಾಕ್ಟೀಸ್ ಮಾಡಾತೇನ " ಅಂದ ಅಂತ . ಅದಕ್ಕ ನಮ್ಮ HOD ಆ ಪೇಪರ್ ತೊಗೊಂಡು " ಆಯ್ತಪ್ಪ ನಿನ್ನ ಪ್ರಾಕ್ಟೀಸ್ ಬಗ್ಗೆ ಮಾತಾಡೋನು , ಆಮೇಲೆ ನನ್ನ ಕ್ಯಾಬಿನ್ಕ ಬಾ " ಅಂದ್ರ ಅಂತೆ :D , LOL
ಇತ್ತ ನಂಗ್ ಯಾರೋ ಕಾಪಿ chit ಕೊಟ್ರು , ನಾ ಆ ಪ್ರೊಗ್ರಾಮ್ ಕಾಪಿ ಮಾಡಿ ಬರಿದು , execute ಮಾಡಿದರ ಏನು errors ಇಲ್ಲದ execute ಅಗಬೇಕೆನ್ರಿ ಅದು ? ಎಸ್ಟ್ ಕಷ್ಟ ಪಟ್ಟ ಓದಿ ಪ್ರೊಗ್ರಾಮ್ ಬರಿದ್ರು ೧೦೦ errors ಬಂದು ತಲಿ ತಿಂತಾವ್ , ಅದ್ರ ಈ copied ಪ್ರೊಗ್ರಾಮ್ ಎಸ್ಟ್ ನೀಟ್ ಆಗಿ execute ಆಯಿತು ಅಂದ್ರ , ನಂಗ HOD ಗೆ ಕರಿದು ತೋರಿಸಲಿಕ್ಕೆ ಹೆದರಿಕೆ ಆಯಿತು . ಇನ್ನೇನಾದ್ರು ಅಗಲಿ ಅಂತ ನಮ್ಮ HOD ಕರಿದು ಪ್ರೊಗ್ರಾಮ್ ತೋರಿಸಿದೆ . ಅವರು ಆವಾಗ ಒಂದು ರೀತಿ ನೋಡಿದರು. ಅವರ ನೋಟ ನೋಡಿ ಇನ್ನೇನ ನಂಗ ಅವರು " ಇಸ್ಟೊತ್ತಿನವರೆಗೂ ಈ ಪ್ರೊಗ್ರಾಮ್ ಬರ್ಯಾಕ ಬರಾಂಗಿಲ್ಲ ಅನ್ನಾತಿದ್ಡಿ , ಈಗ ಹೆಂಗ ಪ್ರೊಗಾಮ ಬರಿದಿ " ಅಂತಾ ನಕ್ಕಿ ಕೆಳ್ತಾರ ಅಂದ್ಕೊಡಿದ್ದೆ. ಆದರ ಅವ್ರು ನನಗ " ಆಯ್ತು ಒಕೆ " ಅಂತ ಹೇಳಿದಾಗ , ಯಾಕೋ ಖುಶಿ ಅಗೋದು ಬಿಟ್ಟ ಬೇಜಾರ ಆಯ್ತು . ತಪ್ಪ ಮಾಡಿದಾಗ ಎನೂ ಅನ್ನದೆ ,ಎನೂ ಶಿಕ್ಷಿಸದೆ ಹಾಗೆ ಸುಮ್ಮನಿದ್ದು ಬಿಟ್ರೆ , ಅದಕ್ಕಿಂತ ದೊಡ್ಡ ಶಿಕ್ಷೆ ಇನ್ನೊಂದಿಲ್ಲ ಅಂತ ಆವಾಗ ನಂಗ ಖಾತ್ರಿ ಅಯ್ತು . ಸುಮ್ಮ ಹಾಗೇ ಹೊರಗೆ ಬಂದೆ , ಯಾಕೋ ಮನಸ್ಸಿಗೆ ಸಮಾಧಾನ ಇರ್ಲಿಲ್ಲ. ಆಮೇಲೆ ನೋಡಿ ಅದೆನು ನಂಗೆ ತಲೆಲಿ ಬಂತು ಗೊತ್ತಿಲ್ಲ .ಹಾಗೆ ಹೇಗೆ ನಂಗೆ ಹುಚ್ಚು ಧೈರ್ಯ ಬಂತೋ ಗೊತ್ತಿಲ್ಲಾ . ನಾ ಹಾಗೇ ಮಾಡಿದರೆ ಮುಂದೆ ಎನಾಗುತ್ತೆ ಅನ್ನೋ ಪರಿವೆಯೆ ಇರದೆ ಸೀದಾ ನಮ್ಮ್ HOD ಕ್ಯಾಬಿನಕ್ಕೆ ಹೋಗಿ " ಸರ್ ಆ ಪ್ರೊಗ್ರಾಮ್ ಕಾಪಿ ಮಾಡಿ ಬರದ್ರೆನ್ರಿ " ಅಂದಾಗ ನಮ್ಮ್ HOD ಗಾಬರಿಸಿಕೊಂಡು " ಎನು ? " ಅಂದರು . ಅದಕ್ಕ ನಾನು ಮತ್ತೊಮ್ಮೆ "ಸರ್ , ಆ ಪ್ರೊಗ್ರಾಮ ನನ್ನ ಸ್ವಂತದ್ದು ಅಲ್ಲಾರೀ, ನಾ ಕಾಪಿ ಮಾಡಿ ಬರದೆನ್ರಿ . ನೀವ ನಂಗ ಫೇಲ್ ಮಾಡಿದ್ರು ಚಿಂತಿ ಇಲ್ಲರಿ, ಆದ್ರಾ ನಿಮಗ ನಾ ಖರೇ ಹೇಳಬೇಕು ಅಂತಾ ಇಲ್ಲೆ ಬಂದ್ರೆನ್ರಿ " ಅಂತಾ ಜೋರಾಗಿ ಅಳಕ್ಕೆ ಶುರು ಮಾಡಿದೆ . ನಮ್ಮ ಹುಡುಗಿಯರಾ ಕೊನೆ ಅಸ್ತ್ರಾ "ಅಳು" ಅಲ್ಲವೇ .
ನಮ್ಮ HOD ಅಸ್ಟೆ ಅಲ್ಲ , ಅಲ್ಲಿ ಬೇರೆ ಕಾಲೇಜುದಿಂದಾ ಬಂದಾ external examinar ಅಲ್ಲೆ ಇದ್ರು . ಆಮೆಲೆ ಅವರಿಬ್ರು " ಒಕೆ ಸರಿ ಹೋಗು" ಅಂದಾಗ ಎನೋ ಒಂದು ನೀರಾಳತೆ . ಹಾಗೇ ಹೊರಗೆ ಬಂದಾಗ , ಪ್ರಸಾದ್ ಅಲ್ಲೆ ನಿಂತ್ಕೊಂಡಿದ್ದಾ . ನಾನು ಅಳುತ್ತಾ ಎಲ್ಲ ವಿಷಯ ಹೇಳಿದಾಗ ಅವನು " ಹೋಗಲಿ ಬಿಡು" ಅಂತಾ ಸಂತೈಸಿದಾ , ಆದ್ರೆ ಅವನು ತನ್ನ tension ಅಂದ್ರೆ HOD ಹತ್ರಾ ಸಿಕ್ಕಾಕೊಂಡಿರೋ ವಿಷಯಾ ಮಾತ್ರ ಹೇಳಿಲ್ಲಾ.
ಆಮೇಲೆ ರಿಸಲ್ಟು ಬಂತು, ನಂಗೆ ನನ್ನ್ ಲ್ಯಾಬ್ ಹೋಗಿರುತ್ತೆ ಅಂತಾ ಖಾತ್ರಿ ಇತ್ತು . ಆದ್ರೆ to my surprise , ನಾನು ಪಾಸ ಅಗಿಬಿಟ್ಟಿದ್ದೆ . ಅಬ್ಬಾ ಸದ್ಯ್ ಮನೆಯವರಿಗೆ ಫೆಲ್ ಅಂತಾ ಹೇಳೊದು ತಪ್ಪಿತು ಅಂತಾ ಖುಷಿ ಎನೋ ಅಯ್ತು , ಆದ್ರೆ ನನ್ನ ಆತ್ಮಸಾಕ್ಷಿ ಅವು ನಿನ್ನ ಮಾರ್ಕ್ಸ್ ಅಲ್ಲಾ ಅಂತಾ ಚುಚ್ಚಿ ಚುಚ್ಚಿ ಹೇಳ್ತಾ ಇತ್ತು .

(ಮುಂದುವರಿಯುವದು ..)

ಆ ದಿನಗಳು -- Sensational, fun filled flashback ( PART I)


" Give me some sunshine , Give me some rain, Give me another chance, I wanna grow up once again"

ಇತ್ತೀಚಿಗೆ ನನ್ನ ೩ ವರ್ಷದ ಮಗಾ ಆರ್ಯನ ಇದೆ ಹಾಡು ಗುಣಗುಣಿಸುತ್ತ ತಿರುಗ್ತಾ ಇರ್ತಾನೆ . ಅದ್ಯಾಕೋ ನನ್ಗೊತ್ತಿಲಾ ಆದ್ರೆ ಈ ಹಾಡು ಅಂದ್ರೆ ಅವನಿಗೆ ತುಂಬಾ ಇಷ್ಟ. ನಾವು ಇತ್ತೀಚಿಗೆ ಹೋದ ಊಟಿ ಪ್ರವಾಸದಲ್ಲಿ ಎದ್ರೆ ಬಿದ್ರೆ ನಮ್ಮವರು ಅಂದ್ರೆ ಪ್ರಸಾದ್ ಇದೆ ಹಾಡು ಕೇಳ್ತಾ ಇದ್ರೂ . ಬಹುತೇಕ ಅವನಿಗೆ ಅದೇ ಪ್ರಭಾವ ಬೀರಿರಬಹುದೇ ? ಅಥವಾ ಅವನ ಅಮ್ಮನಿಗೆ ಈ ಹಾಡು ಅಂದ್ರೆ ತುಂಬಾ ಇಷ್ಟ ಅಂತ ಅದನ್ನ ಕಲಿಲಿಕ್ಕೆ ಪ್ರಯತ್ನ ಪಡ್ತಾ ಇದಾನಾ ? ಅದೇನೇ ಇರಲಿ ಅವನ ಮುದ್ದು ಮುದ್ದಾದ ತೊದಲು ನುಡಿಯಲ್ಲಿ , ಆ ದ್ವನಿ ಎತ್ತರಿಸಿ " Give me another chance, I wanna grow up once again” ಅಂದ್ರೆ ನನ್ನ ಹಾಗೂ ಪ್ರಸಾದ ಮುಖದಲ್ಲಿ , ಎಲ್ಲೋ ನಮ್ಮ ಮಗ ಸೋನು ನಿಗಮ್ ಥರ ಸ್ಟಾರ್ ಆಗಿಬಿಟ್ಟ ಅನ್ನೋ ಥರ ಹೆಮ್ಮೆ. ಆಗ ಪ್ರಸಾದ್ ಅವನಿಗೆ " Baby you already have chance , grow up as you want" ಅಂದ್ರೆ ನಂಗೆ ಅದು ನಂಗೆ ಹೇಳ್ತಾ ಇದ್ದಾರೆ ಅನ್ನಿಸುತ್ತೆ . ಹೌದು ಅದು ನಂಗೆ ಹೇಳಿದ್ರು , ಯಾಕಂದರೆ ನಾನು ಯಾವಾಗಲು ದೇವರನ್ನ ಪೀಡಿಸೋದು ಒಂದೆ ಒಂದಕ್ಕೆ ಮಾತ್ರಾ ಅದು ನನ್ನ ಬಾಲ್ಯನ ಹಾಗೂ ಆ ಕಾಲೇಜ್ ದಿನಗಳನ್ನಾ ಇನ್ನೊಂದು ಸಲ ಜೀವಿಸೋಕೆ chance ಕೊಡು ಅಂತಾ. ಅದಕ್ಕೆ ಏನೋ ದೇವರಿಗೆ ನನ್ನ ಪೀಡೆ ಸಾಕಾಗಿ ನನ್ನ ಮಗ ಆರ್ಯನ್ ನನ್ನ ಹತ್ರಾ ಕಳಿಹಿಸಿಕೊಟ್ಟ ಬಿಟ್ಟಾ ಅನಿಸುತ್ತೆ , ಅವನ ಬಾಲ್ಯದ ಜೊತೆ ನನ್ನ ಬಾಲ್ಯನ ಇನ್ನೊಮ್ಮೆ ಜೀವಿಸಕ್ಕೆ ನಂಗು ಇನೊಂದು chance ಕೊಟ್ಟ ಅಲ್ವಾ ? .
ನಂಗೆ ಈ " 3 idiots " ಸಿನಿಮಾ ತುಂಬಾ ಹಿಡುಹಿಸಿತು. " we just love this movie" ಇದು ನಮ್ಮ ಸ್ಟೋರಿ ಅನೋವಸ್ಟು ಫೀಲ್ ಆಯಿತು . ಹೌದು ಇದು ನಮದೆ ಸ್ಟೋರಿ , ಯಾಕೆಂದರೆ ನಾನು , ಪ್ರಸಾದ್, ಬಸ್ಯಾ, ಅನುಪಮ, ಶೈಲಜಾ, ಅರ್ಚು , ಕೊಶಿ , ರವಿ , ನದೀಮ ಎಲ್ಲರೂ ಒಂದು ಕಾಲದಲ್ಲಿ , ಅಂದ್ರೆ ನಮ್ಮ college days ನಲ್ಲಿ ಅದ್ರೆ ಥರ chemistry share ಮಾಡ್ಕೊಂದ್ವಿ . ಈ ಸಿನಿಮಾ ನೋಡಿ ನಮ್ಮ ಕಾಲೇಜ್ ಫ್ರೆಂಡ್ ಬಸ್ಯಾ ( ಬಸವರಾಜ್) ಗೆ ತಡಿಲಾರದೆ ಅಮೆರಿಕದಿಂದ ಆಗಿಂದಾಗೆ ನಮಗೆ ಫೋನ್ ಮಾಡಿ ಹೇಳಿದ " ಲೇ ಪರ್ಸ್ಯಾ ( ಪ್ರಸಾದ ) , ಮಬ್ಬಕ್ಕಾ ( ಅಂದ್ರೆ ನಾನು) 3 idiots ಸಿನಿಮಾ ನೋಡಿ ನೀವು ಎಲ್ಲಾ ನೆನಪಾದ್ರೆಲೆ , college days ಎಲ್ಲ ನೆನಪಾತ್ಲೇ " ಅಂದಾಗ್ ಪ್ರಸಾದ ಹಾಗು ನಂಗೆ ಎನೊ ಒಂಥರಾ ಖುಷಿ ಆಯ್ತು , ಯಾಕೆಂದ್ರರೆ ನಮ್ಮ ಇಬ್ರಿಗು ತುಂಬ ನೆನಪಾಗೋದೆ ಹಾಗೂ ನಾವಿಬ್ರು ತುಂಬಾ discuss ಮಾಡೊದೇ ಆ college ದಿನಗಳು. ಹಾ ನಿಮಗೆ ಹೇಳೋದೇ ಮರ್ತಿದ್ದೆ , ನಾನು ಹಾಗೂ ಪ್ರಸಾದ್ ಓದಿದ್ದು ಒಂದೇ ಇಂಜಿನಿಯರಿಂಗ್ ಕಾಲೇಜ್ , ಒಂದೇ class , ಒಂದೇ section , ಅದರಿಂದ ನಾವಿಬ್ರು ಗಂಡ ಹೆಂಡತಿ ಕಿಂತ್ಲು ಮೊದಲು ಸಹಪಾಟಿಗಳು, ಕ್ಲೋಸ್ ಫ್ರೆಂಡ್ಸ್ , ಬೆಸ್ಟ್ ಫ್ರೆಂಡ್ಸ್ . ಬಸ್ಯಾ ಒಬ್ಬನೆ ಅಲ್ಲ ನಮ್ಮ ಇನ್ನೊಬ್ಬ ಕ್ಲೋಸ್ ಫ್ರೆಂಡ್ ಕೋಶಿ ಸಿನಿಮಾ ನೋಡಿದ ತಕ್ಷಣ ಫೋನ್ ಮಾಡಿ ಪ್ರಸಾದಗೆ ಹೇಳಿದ " bugger you must watch that movie , it will take back to our college days " . ಅಂದಾಗ್ ನಂಗೆ ಮತ್ತು ಪ್ರಸಾದಗೆ ಆ ಸಿನಿಮಾ ಎಷ್ಟು ಬೇಗ ಆಗುತ್ತೆ ಅಸ್ಟು ಬೇಗ ನೋಡ್ಬೇಕು ಅನ್ನೋ ತುಡಿತ ಜಾಸ್ತಿ ಆಯಿತು . ನಾವು ಅವಾಗ್ ಊಟಿ ಟ್ರಿಪ್ನಲ್ಲಿ ಇದ್ದಿವಿ , so back to ಬೆಂಗಳೂರಿಗೆ ಬರೋವರ್ಗು ನಾವು ಕಾಯಬೇಕಾಗಿತ್ತು .
ನಮಗೆ ನಮ್ಮ ಕಾಲೇಜ್ ದಿನಗಳನ್ನ ಎಂಜಾಯ್ ಮಾಡದೆ ಕಳಿದ್ವಿ ಅನ್ನೋ ಹಳಹಳಿನೇ ಇಲ್ಲ , ಯಾಕೆಂದರೆ ಕಾಲೇಜ್ life ನಾ ಎಳ್ಳಸ್ಟು ಬೀಡದೆ ಎಂಜಾಯ್ ಮಾಡಿದವರು ನಾವು . ನಮಗೆ ಒಳ್ಳೆ ಮಾರ್ಕ್ಸ್ ಬರ್ಲಿಲ್ಲ ಅಂತ ಏನು ಬೇಸರ ಇಲ್ಲ . ಇಲ್ಲಿ ಬಸ್ಯಾ ಮಾತ್ರ exceptional ಯಾಕಂದ್ರೆ ಅವನು ನಮ್ಮ ಕಾಲೇಜ್ Topper :) . ಇನ್ನು college ಬಗ್ಗೆ ಹೇಳಬೇಕು ಅಂದ್ರೆ ನಮಗೆ ನಿಜವಾಗ್ಲೂ ಇನ್ನೊಂದು ಚಾನ್ಸ್ ಬೇಡ , ಕಾಲೇಜ್ ಲೈಫ್ನಾ ತುಂಬಿ ತುಂಬಿ complete ಆಗಿ ಎಂಜಾಯ್ ಮಾಡಿದಿವಿ , ನೂರಕ್ಕೆ ನೂರು (100/100 ) ಸ್ಕೋರ್ ಮಾಡಿದ ಹಾಗೆ :) .
ಸಿನಿಮಾದ ತುಂಬಾ scenes ನಮಗೆ ನಮ್ಮ ಕಾಲೇಜ್ ದಿನಗಳ ನೆನಪಿನ ಪುಟಕ್ಕೆ ಕರೆದೊಯ್ದವು . ನಂಗೆ ಒಂದು ವಿಚಿತ್ರ ಅನ್ನಿಸಿದಂದ್ರೆ ಈ ಸಿನಿಮಾ ಕಥೆ ಬರಿದವಿರಿಗೆ ಅಥವಾ ಚೇತನ್ ಭಗತ ಗೆ ನಮ್ಮ ಕಾಲೇಜ್ ದಿನಗಳ ಬಗ್ಗೆ ಹೇಗೆ ಗೊತ್ತಾತು ಅಂತ .
ಯಾಕಂದರೆ ಗೊತ್ತು ಪರಿಚಯ ಇಲ್ಲದವರ ಮದುವೇಲಿ ಊಂಡವರು ನಾವು , ಮದುವೆ ಬಿಡಿ ಪ್ರಸಾದ್ ಹಾಗು ಕೋಶಿ ಪರಿಚಯ ಇಲ್ಲದವರ್ ಗೃಹಪ್ರವೇಶದಲ್ಲೂ ಊಂಡು ಬಂದವರು , ಅದು ಥೇಟ್ ಆ ಸಿನಿಮಾದಲ್ಲಿ ಬರೋ scenes ದಂತೆ ಶರ್ಟ್ ಪ್ಯಾಕ್ಕೆಟ್ನಲ್ಲಿ ಒಂದು ಕಾಲಿ envelop ಇಟ್ಕೊಂಡು ಊಟ ಮಾಡಿ ಬಂದರಂತೆ , ಅದನ್ನ ಅವರು ಹೇಳಿಕೊಂಡಿದು ನೋಡ್ಬೇಕು ಏನೋ ಒಂದು ಸಾಧನೆ ಮಾಡಿದವರ ಥರ ಹೇಳಿದ್ರು , ಸಾಧನೆನೆ ಬಿಡಿ , ಮದುವೆ ಮನೆಲೀ ಆದ್ರೆ ಸಿಕ್ಕಾಕೋ ಚಾನ್ಸ್ ಸ್ವಲ್ಪ ಕಡಿಮೆ , ಆದ್ರೆ ಗ್ರಹಪ್ರವೇಶದಲ್ಲಿ ಅದು ಸ್ವಲ್ಪ ಜನರ ಕಾರ್ಯಕ್ರಮದಲ್ಲಿ ಈ ಧೀರರು ಊಟ ಮಾಡಿ ಬಂದಿದ್ದರಲ್ಲ ಅದು ಒಂದು ಸಾಧನೆನೆಯೊ ಅಥವಾ ಭಂಡ ಧೈರ್ಯನೊ.
ಇನ್ನೊಂದು ಸ್ಟೋರಿ ಹೆಳ್ತಿನಿ ಅಲ್ಲ ಅಲ್ಲಾ ಇನ್ನೊಂದು ನಮ್ಮ ಈ ಹುಡುಗರ ಸೆಕ್ರೆಟ್ , ಅದನ್ನಾ ಮೊನ್ನೆ ಮೊನ್ನೆ ನಂಗೆ ಪ್ರಸಾದ್ ಹೇಳಿದ್ದು . ಅಲ್ಲಾ! ಕಾಲೇಜನಲ್ಲಿ ನಾ ಇವರ ಗರ್ಲ್ ಫ್ರೆಂಡ್ ಇದ್ರೂ ನನಗೆ ಹೇಳದೆ ಇಷ್ಟು ದಿನ ಈ ಸೆಕ್ರೆಟ್ maintain ಮಾಡಿದ್ರು , ಇವರ ನಿಯತ್ತಿನ ಗೆಳೆತನವನ್ನ ಮೆಚ್ಚಬೇಕಾದಿದ್ದೆ . ಇದು ಹುಡುಗರು ನಮಗೆ ಅಂದ್ರೆ ಹುಡುಗಿಯರಿಗೆ ಹೇಳದೆ ಮಾಡಿರೋ ಮಹಾ ಕಾರ್ಯ . ಹೌದು ನಾವು ಇವರ ಎಸ್ಟೇ ಕ್ಲೋಸ್ ಫ್ರೆಂಡ್ಸ್ ಅದ್ರುನು ಈ ಹುಡುಗರು ನಾವ್ ಹುಡುಗಿಯರ ಬಾಯಲ್ಲಿ ಮಾತು ನಿಲ್ಲೋಲ್ಲ ಅಂತ ತುಂಬಾನೇ ಸೆಕ್ರೆಟ್ maintain ಮಾಡ್ತಿದ್ರು .ಚಿಕ್ಕ್ ಚಿಕ್ಕ ವಿಷಯಗಳಿಗೆ ಜಗಳಾ ಆಡೋಳು ನಾನು , ಆದ್ರೆ ಮೊನ್ನೆ ನಂಗೆ ಈ ವಿಷಯ ಪ್ರಸಾದ ಹೇಳಿದಾಗ ಜಗಳ ಆಡಬೇಕು ಅನ್ನಿಸಲೇ ಇಲ್ಲ , ಬದಲಿಗೆ ಇವರ ಗಟ್ಟಿ ಗೆಳೆತನ ನೋಡಿ ಖುಷಿ ಆಯಿತು . ಪ್ರಸಾದ್ ನಂಗೆ " ಇದನ್ನ ನಾನು ನಿಂಗೆ ಕಾಲೇಜ್ ನಲ್ಲೆ ಹೇಳಬೇಕು ಅಂದ್ಕೊದ್ಡಿದ್ದೆ ಆದ್ರೆ ಇದು ಹುಡುಗರ ಟಾಪ್ ಸೆಕ್ರೆಟ್ ಆಗಿತ್ತು , and I had to keep it up " ಅಂತ ಏನೇನೊ ಸಾಂತ್ವನ ಹೇಳೋಕೆ ಟ್ರೈ ಮಾಡ್ತಾ ಇದ್ದುದು ನೋಡಿ ನಗು ಬರ್ತಾ ಇತ್ತು .
ಅಯ್ಯೋ ಅದೇನು ಸೆಕ್ರೆಟ್ ಅಂತ ಹೇಳೋದು ಬಿಟ್ಟು ಏನೇನೊ ಕೊರಿತಾ ಇದ್ದಾಳೆ ಅಂದ್ಕೊಳ್ತಾ ಇದ್ದೀರಾ . ಅಂತಾದೇನು ಇಲ್ಲ ಬಿಡಿ . ಟಾಪ್ ಸೆಕ್ರೆಟ್ ವಿಷಯ ಅಂದ್ರೆ ಈ ಹುಡುಗರು ನಮ್ಮ ಪ್ರೊಫೆಸರ್ ಕ್ಯಾಬಿನ್ ದಿಂದ ಇಂಟರ್ನಲ್ question papers ಕದಿತಿದ್ರು ಅಂತೆ . ಅದಕ್ಕೆ ಕಾಲೇಜ್ peon ಕೂಡ ಸಹಾಯ ಮಾಡ್ತಾ ಇದ್ದ ಅಂತೆ . ನೋಡಿ ಈ ವಿಷಯ ನಮಗೆ ಅಂದ್ರೆ ಹುಡುಗಿಯರಿಗೆ ಗೊತ್ತೇ ಇರ್ಲಿಲ್ಲ . ನಾವೆಲ್ಲಾ ಎದ್ದು ಬಿದ್ದು ಅಲ್ಲಿ ಇಲ್ಲಿ ಓಡಾಡಿ notes ತೊಗೊಂಡು ಓದಿದರೂ ಕೂಡ ಈ ಹುಡುಗರಸ್ಟು ಮಾರ್ಕ್ಸ್ ತೆಗಿಲಿಕ್ಕೆ ಆಗ್ತಿರ್ಲಿಲ್ಲ . ಈ ಹುಡುಗರು ನಮ್ಮ ಜೊತೇನೆ ಓಡಾಡಿಕೊಂಡು , ನಮ್ಮಸ್ಟೆ ಟೈಮ್ ವೇಸ್ಟ್ ಮಾಡಿದ್ರು ಅದೇಗೆ ಅಸ್ಟೊಂದು ಮಾರ್ಕ್ಸ್ ತೆಗಿತಾರೆ ಅನ್ನೋದೇ ನಮಗೊಂದು ಬಿಡಿಸಲಾಗದ ವಗಟಾಗಿತ್ತು . " ಅದೆಗ್ರೋ ನಿಮಗೆ ಅಸ್ಟೊಂದು ಮಾರ್ಕ್ಸ್ , ಓದೋದು ಬಿಟ್ಟು ಬರೀ ಕೆಲಸಕ್ಕೆ ಬಾರದ ಕೆಲಸಗಳನ್ನ ಮಾಡ್ಕೊಂಡು ತಿರಗ್ತಿರಾ ಆದ್ರೆ ಎಲ್ಲ ಇಂಟರ್ನಲ್ಸಗಳಲ್ಲಿ ಒಳ್ಳೆ ಮಾರ್ಕ್ಸ್ ಇಡ್ತಿರಲ್ಲ " ಅಂತ ನಾವು ಕೇಳಿದ್ರೆ . " ನಾವೆಲ್ಲಾ ಶ್ಯಾನ್ಯಾ ಮಂದಿ ನಿಮ್ಮಂಗ ಅಲ್ಲ , ಇರ್ಲಿ ಬಿಡ ಅಂತಾ ತಲಿ ಇಲ್ಲದಾ ನಿಮ್ಮಂತಾ ಹುಡುಗಿಯರ ಜೋಡಿ friendship ಮಾಡೇವ, ಎಲ್ಲ ಹುಡುಗಿಯರು ನಮ್ಮ ಜೋಡಿ ದೋಸ್ತಿ ಮಾಡಾಕ ಸಾಯ್ತಾರ , ನೀವ ಲಕ್ಕಿ ಅದಿರಿ ನೋಡ " ಅಂತ ಹಾರಿಕೆ ಉತ್ತರ ನೀಡಿ ಹುಬ್ಬು ಹಾರಿಸೋದು ನೋಡ್ಬೇಕು . ಮೊನ್ನೆ ಪ್ರಸಾದ್ ಮತ್ತು ಕೋಶಿ ಕೂಡಿ ನಂಗೆ " ಆಯ್ಯೊ ಪಾಪಾ ಅಸ್ಟು ಕಸ್ಟ ಪಟ್ಟೂ ಒದಿದ್ರು ನಮ್ಮಸ್ಟು percentage ತೆಗಿಲಿಕ್ಕೆ ಆಗಲಿಲ್ಲಾ ಅಲ್ಲ ನಿನಗೆ" ಅಂತ ಗೇಲಿ ಮಾಡ್ತಾ ಇದ್ದಾಗ ಇಬ್ರುಗು ಹಾಕಿ ನಾಲ್ಕು ತಟ್ಟಬೇಕು ಅನ್ನಿಸ್ತಾ ಇತ್ತು .
( ಮುಂದುವರಿಯುವದು ..)

Monday, February 1, 2010

ಅವಳು ಹೀಗೆ ಮಾಡಿದ್ದು ಸರೀನಾ ?

ಕೆಲವೊಮ್ಮೆ ನಮ್ಮ ಮನಸ್ಸಿನ ಸ್ಮೃತಿ ಪಟಲದ ಮೇಲೇ ತುಂಬಾ ವರ್ಷದ ಹಿಂದೆ ನಡೆದ ಘಟನೆಗಳು ಥಟ್ಟನೆ ನೆನಪಾಗಿ ಬೀಡುತ್ತವೆ ,ಹಾಗೆಯೇ ನಮ್ಮನ್ನ ತುಂಬಾ ಕಾಡ್ತಾನು ಇರ್ತಾವೆ . ನಂಗೆ ನನ್ನ ಬಾಲ್ಯದ ಗೆಳತಿಯರ ಜೊತೆ ಆಡಿ ಪಾಡಿ ಬೆಳೆಯುವಾಗ ನಡೆದ ಅನೇಕ ಘಟನೆಗಳು ಹಾಗೆ ಥಟ್ಟನೆ ನೆನಪಾಗಿ ಮಾಯವಾಗಿ ಬೀಡುತ್ತವೆ. ಕೆಲವೊಂದು ಸಲ ನಾ ಹಾಗೇ ಅವಳ ಜೊತೆ ಜಗಳ ಅಡುಬಾರದಗಿತ್ತೇನೋ ಅನ್ನಿಸಿದರೆ , ಮತ್ತೊಂದು ಸಲ ಅವಳೇಕೆ ಹಾಗೇ ಮಾಡಿದಳು ಅಂತ ಮನಸ್ಸು ಕೇಳ್ತಾ ಇರ್ತದೆ . ಮೊನ್ನೇ ನಾನು ಆಫೀಸ್ ನಲ್ಲಿ PMP ( Project Management Professional) ಕೋರ್ಸ್ ಮಾಡಬೇಕು ಅಂತ ನನ್ನ ಮ್ಯಾನೇಜರ್ ಗೆ ಹೇಳ್ತಾ ಇದ್ದೆ . ಅವರು ತುಂಬಾ ಸರಳ ಹಾಗೂ ಯಾವಗಲು ಎಲ್ಲರನ್ನು ಗೌರವದಿಂದ ಮಾತಾಡಿಸೊ ವ್ಯಕ್ತಿ , ಆದ್ರೆ ಅವತ್ಯಕೋ ಸ್ವಲ್ಪ ಫ್ರಾಂಕ್ ಆಗಿ ನಂಗೆ " ನೀವು PIMP ಆಗಬೇಕು ಅಂತ ಅಂದ್ಕೊಡಿದಿರ" ಅಂತ ಚೇಡಿಸಿದಾಗ್ ಯಾಕೋ ನಂಗೆ ತುಂಬಾ ಕಸಿವಿಸಿ ಆಯಿತು. ನನಗ್ಯಾಕೋ ಛೇ ಇವರ ಹತ್ರ ಯಾಕೆ ನಾನು ಕೇಳಿದೆ ಅನ್ನೋವಸ್ತು ಹಿಂಸೆ ನನಗೆ. ನಾನು ಸ್ವಲ್ಪ ಸ್ಟ್ರಿಕ್ಟ್ ಆಗಿ " ನೋಡಿ ಸರ್ ನನಗೆ ಈ ಥರ ಮಾತುಗಳೆಲ್ಲ ಹೀಡಿಸೋಲ್ಲ, ನೀಮಗೆ ಇದೆಲ್ಲ ಚಿಕ್ಕ ಚಿಕ್ಕ ಮಾತಗಿರ್ಬೇಕು ಆದ್ರೆ ನಂಗೆ ಇದು ತುಂಬಾ ದೊಡ್ಡ ವರ್ಡ್ " ಅದಕ್ಕೆ ಅಲ್ಲೇ ಪಕ್ಕದಲ್ಲೇ ಇದ್ದ Sr architect ನನಗೆ " ಹೇಯ್ ಕಮಾನ್ ಇದೆಲ್ಲ ಸಾಫ್ಟ್ವೇರ್ ಇಂಡಸ್ಟ್ರಿ ನಲ್ಲಿರೋ floating ಜೋಕ್ಸ್ " ಅಂದಾಗ್ ನಂಗೆ ಛೇ ಇಲ್ಲಿ ಇರೋರೆಲ್ಲ ಹೀಗೇನ ಅಂದ್ಕೊಂಡು ನನ್ನ ಕ್ಯಾಬಿನ್ ಗೆ ಬಂದು ಕುಳಿತೆ . ಆಗ ನನ್ನ ಮನಸಿನ ಪರದೆ ಮೇಲೆ ನನ್ನ ಬಾಲ್ಯದ ಗೆಳತಿ ಅನ್ನಪೂರ್ಣ ಕರಬನವರ್ ಕಥೆ ಒಂದೊದಾಗಿ ಬಿಚ್ಕೊಳುತ್ತ ಹೋಯ್ತು . ಅನ್ನಿ ನನ್ನ ಬಾಲ್ಯದ ಗೆಳತಿ . ಅವಳನ್ನ ನಾವು ಅನ್ನಿ ಅನ್ನೋದಕಿಂತ ಜಾಸ್ತಿ ಕರ್ಬನವರ ಅಥವಾ ಕರಬಿ ಅನ್ನೋದೇ ಜಾಸ್ತಿ. ನಮ್ಮ ಉತ್ತರ ಕರ್ನಾಟಕ ದಲ್ಲಿ ನಾವು ಹೆಸರಿಗಿಂತಲೂ ಅಡ್ಡ ಹೆಸರನ್ನೇ ಜಾಸ್ತಿ ಉಪಯೋಗಿಸೋದು. ಅದು ಎಸ್ಟರ್ ಮಟ್ಟಿಗೆ ಅಂದ್ರೆ ಒಮ್ಮೆ ನಮ್ಮ ಪತಿದೇವರು ಅವರ ಫ್ರೆಂಡ್ ಶೀಗಿಹಳ್ಳಿ ಮನಿಗೆ ಹೋಗಿದ್ದರು . ಅವರ ತಂದೆ ಅಲ್ಲೇ ಹಾಲ್ ನಲ್ಲಿ ಕುಳಿತು ಕೊಂಡಿದ್ದರು . ಆಗ ನಮ್ಮ ರಾಯರು ಅವರನ್ನ " ಶೀಗ್ಯಾ ಇಲ್ಲೆನ್ರಿ ಮನ್ಯಾಗ್" ಅಂತ ಕೇಳಿದ್ರು . ಆಗ ಅವರು ನಕ್ಕೊಂಡು " ನಾನು ಶೀಗಿಹಳ್ಳಿನೆ , ಬಾ ಒಳಗ ಅವನು ಅದಾನ್ " ಅಂದಾಗ ನಮ್ಮ ಯಜಮಾನ್ರು ಮುಖ ನಾಚಿಕೆಯಿಂದ ಕೆಂಪ ಆಯಿತು. ನಾನು ಹಾಗೆ ನನ್ನ ಪ್ರೀತಿಯ ಗೆಳತಿ ಅನೂ ನ ಕರಬಿ ಅನ್ನೋದೇ ಜಾಸ್ತಿ . ನಾನು ಅವಳು ಒಂದನೇ ಕ್ಲಾಸಿನಿಂದ ಒಟ್ಟಿಗೆ ಓದಿದ್ದು. ನಮ್ಮದೇನು ಅಂತ ಕ್ಲೋಸ್ ಗೆಳೆತನ ಇರ್ಲಿಲ್ಲ ಅದ್ರು ಕೂಡಿ ಆಡಿ ಕಲಿತಿದ್ರಿಂದ ನನ್ನ ಹೃದಯಕ್ಕೆ ಹತ್ತಿರ . ನೀವು ಯೋಚಿಸ್ತಾ ಇರ್ಬೇಕು ಅಲ್ಲಾ " ಕಥೆ ಏನೋ pimp ನಿಂದ ಶುರುವಾಗಿ ಅಡ್ಡ ಹೆಸರಿಗೆ ಬಂದು ಎಲ್ಲೊ ತಿರಗ್ತಾ ಇದೆ ಅಂತ "ಇಲ್ಲ ಎಲ್ಲದಕ್ಕೂ ಸಂಬಂಧ ಇದೆ. ಹೌದು ನನ್ನ ಗೆಳತಿ ಪ್ರಾಣ ಕೊಟ್ಟಿದ್ದು ಈ ಪಿಂಪ್ಗಳಿಂದ ಅಂದ್ರೆ ಈ ಹೆಣ್ಣು ವ್ಯಾಪಾರ ಮಾಡುವ ದಲ್ಲಾಳಿಗಳಿಂದ .ನಾನು ಅವಳು ಏಳನೆಯ ತರಗತಿವರೆಗೆ ಓದಿದ್ದು ಕನ್ನಡ ಹೆಣ್ಣು ಮಕ್ಕಳ ನಂಬರ್ ಶಾಲೆ ಯಲ್ಲಿ . ಅವಾಗ್ ನಮ್ಮೂರಿನಲ್ಲಿ ಕಾನ್ವೆಂಟ್ ಶಾಲೆಗಲಿರಲಿಲ್ಲಾ , ಇದ್ರೂ ನಮ್ಮನ ಅಲ್ಲಿ ಹಾಕ್ತಿರ್ಲಿವೇನೋ .. ಎಲ್ಲ ಜಾತಿಯ , ಎಲ್ಲ ವರ್ಗಗಳ ಮಕ್ಕಳು ಸರ್ಕಾರೀ ಶಾಲೆಗಳಿಗೆ ಹೋಗ್ಬೇಕು . ನಾನು ಹಾಗೂ ಅವಳು ಮತ್ತು ಇನ್ನು ಸುಮಾರು ಜನ ಗೆಳತಿಯರು ಪ್ರೈಮರಿ ಸ್ಕೂಲ್ ಕನ್ನಡ ಹೆಣ್ಣು ಮಕ್ಕಳ ಸರ್ಕಾರೀ ಶಾಲೆಯಲ್ಲಿ ಮುಗಿಸಿ , ಹಾಯ್ಸ್ಕೂಲ್ ಗೆ ( ಪ್ರೌಡಶಾಲೆಗೆ ) ಬೇರೆ ಶಾಲೆ ಸೇರಿಕೊಂಡ್ವಿ .ನಮ್ಗೆ ಬಾಲ್ಯ ಕಳೆದು ಪ್ರೌಡವಸ್ಥೆಗೆ ಕಾಲಿಡ್ತಾ ಇದ್ದಿವಿ ಅಂತ ಆ ಹೊಸದಾಗಿ ಸೇರಿಕೊಂಡ ನಮ್ಮ ಪ್ರೌದಶಾಲೆಗಿಂತಲೂ ಆ ಕರಬಿ ಸಾವು ಸಾರಿ ಸಾರಿ ಹೇಳ್ತಾ ಇತ್ತು . ಯಾಕೆಂದರೆ ಪ್ರೌಡಶಾಲೆಗೆ ಸೇರಿಕೊಂಡ ಕೆಲೆವೆ ದಿನಗಳಲ್ಲೇ ಅಲ್ವೇ ಅವಳು ನಮ್ಮನ ಬಿಟ್ಟು ದೂರದ ಬಾರದ ಲೋಕಕೆ ಹೋಗಿದ್ದು.ಅವರ ಮನೆ ಸ್ಲಂ ಥರ ಇರೋ ಏರಿಯಾದಲ್ಲಿ ಇತ್ತು. ನಾನು ಸುಮಾರು ಸಲ ಅವಳನ್ನ ಕರಿಲಿಕ್ಕೆ ಅಲ್ಲಿ ಹೋಗಿದ್ದೆ. ಅದ್ಯಾಕೋ ಕೆಲವೊಂದ್ ಸಲ ಅಲ್ಲಿ ಹೋಗೋಕೆ ಹಿಂಸೆ . ಅವರಮ್ಮ ತುಂಬಾ ಸಾದ್ವಿ , ಪಾಪದವರು. ನಾನು ಹೋದಾಗೊಮ್ಮೆ ಏನಾದ್ರು ಕೆಲಸ ಮಾಡ್ತಾನೆ ಇರ್ತಿದ್ರು . ಅವರ ಮನೆ ಕಸಬು ಕೌದಿ ( ಹಳೆ ಅರಿವೆಗಳಿಂದ ಹೊಲೆದ ಹೊದ್ದಿಗೆ ) ಹೊಲಿಯೋವದು , ಇಲ್ಲ ಅಂದ್ರೆ ಕಸಬರಿಗೆ ಕಟ್ಟೋದು , ಅದು ಇಲ್ಲ ಅಂದ್ರೆ ಇನ್ನು ಏನೋ ಅದೇ ಥರ ಮಾಡೋದು. ಅವರ ಅಪ್ಪ ಕೂಲಿ ಮಾಡ್ತಾ ಇದ್ರು , ಅವರನ್ನ ಸುಮಾರು ಸಲ ಅವರ ಮನೆಯ ಕಟ್ಟೆಯ ಮೇಲೆ ಕುಡಿದು ಮಲಗಿದ್ದು ನೋಡಿದ್ದೀನಿ. ಅವಾಗ್ ಅಲ್ಲಿಂದ ಅವಳನ್ನು ಕರಿಯದೆ ಓಡಿ ವಾಪಸ್ಸು ಬಂದಿದ್ದು ನೆನಪಿದೆ . ಆಗ್ ಅವರ ಮನೆ ಹತ್ರ ಇದ್ದಿದ್ದೆ ಈ ರೆಡ್ ಲೈಟ್ ಏರಿಯ. ಅವಳನ್ನ ಕರಿಲಿಕ್ಕೆ , ಅವಳ ಜೊತೆ ಆಡಲಿಕ್ಕೆ ಅಲ್ಲಿ ಯಾಕೆ ಹೋಗ್ತಿಯ ಅಂತ ನಮ್ಮ ಮನೇಲಿ ನಮ್ಮ ಮಾಮನ ಹತ್ರ ಸುಮಾರು ಸಲ ಬೈಸ್ಕೊಂಡಿದ್ದು ನೆನಪು . ಅವಾಗ್ ಅರ್ಥ ಆಗ್ತಿರ್ಲಿಲ್ಲ ಅಂತೇನಿಲ್ಲ , ಅವರು ಯಾಕೆ ಬೈಯ್ತಾರೆ ಅಂತ ಅರ್ಥ ಆಗ್ತಿತ್ತು. ಅದ್ರು ಗೆಳತಿಯರು ಆಟ ಆಡಲಿಕ್ಕೆ ಗುಂಪು ಮಾಡಿದ್ರೆ ಕರಬಿ ಇರಲೇ ಬೇಕು.ಅವರ ಮನೆ ಹತ್ರನೇ ಆಟದ ಮೈದಾನ್ ಇದ್ದಿದ್ರಿಂದ ಸುಮಾರು ಸಲ ದಣಿವಾದಗ್ ನೀರು ಕುಡಿಲಿಕ್ಕೆ ನಮ್ಮೆಲ್ಲರ ಠೀಕಾನಿ ಅಲ್ಲೇ .ಆದ್ರೆ ಕೆಲವೊಂದು ಸಲ ಅವಳಿಗೆ ಅದ್ಯಾಕೋ ನಮ್ಮನ ಅವರ ಮನೆಗೆ ಕರೆದುಕೊಂಡು ಹೋಗೋಕೆ ಇಷ್ಟ ಇರ್ತಿರ್ಲಿಲ್ಲ .ಆಮೇಲೆ ಆಮೇಲೆ ಯಾಕೋ ಏನೋ ನಾನು ಅವಳ ಮನೆ ಹತ್ರ ಹೋಗೋದು ಕಡಿಮೆ ಮಾಡಿದೆ. ಅವಳು ನಂಗೆ ಅಷ್ಟೇನು ಕ್ಲೋಸ್ ಫ್ರೆಂಡ್ ಆಗಿರಲಿಲ್ಲ. ಹಾಯ್ಸ್ಕೂಲ್ ಸೇರಿ ಒಂದೆರಡು ತಿಂಗಳು ಆಗಿರಬಹುದು ಏನೋ . ನಮಗೆಲ್ಲ ಆ ದೊಡ್ಡ ದೊಡ್ಡ ಹೊರೆಯಂತ ಪಾಟಿಚೀಲ ( ಸ್ಕೂಲ್ ಬ್ಯಾಗ್ ) ಬಿಟ್ಟು ಹಾಯ್ಸ್ಕೂಲ್ ಹುಡಗಿರ ಥರ ಬರಿ ನಾಲ್ಕು ಪುಸ್ತಕ ಕೈಯಲ್ಲಿ ಕೈಯಲ್ಲಿ ಹಿಡ್ಕೊಂಡು ಹೊಗೊದಂದ್ರೆ ಅದೇನೋ ಥ್ರಿಲ್ , ಖುಷಿ . ಅದರ ಮೇಲೆ ಹಾಯ್ಸ್ಕೂಲ್ ಹೋಗ್ತಾ ಇದ್ದಿವಿ ಅಂದ್ರೇನೆ ನಾವೆಲ್ಲಾ ಹರೆಯಕ್ಕೆ ಕಾಲಿಡ್ತಾ ಇದ್ದೀವಿ ಅಂತ ಅರ್ಥ , ಅದೇ ಏನೋ ಒಂಥರಾ ಸೊಗಸು. ನಮ್ಮ ಈ ಹೊಸ ಹೊಸ ಅನುಭವಗಳನ್ನ ಅನುಭವಿಸೋದ್ರಲ್ಲಿ ಎಷ್ಟು ಬ್ಯುಸಿ ಆಗಿದ್ವಿ ಅಂದ್ರೆ ನಮ್ಮ ಜೊತೇಲೆ ಓದ್ತಾ ಇರೋ ನಮ್ಮ ಗೆಳತಿ ಅದೇ ಯೌವನವಸ್ಥೆಯಿಂದ ನರಕಯಾತನೆ ಅನುಭವಿಸ್ತಾ ಇದ್ದಾಳೆ ಅಂತಾನೆ ಗೊತ್ತಾಗಲಿಲ್ಲ . ಅವೊತ್ತೊಂದಿನ ಆ ಸುದ್ದಿ ಬರಸಿಡಿಲಿನಂತೆ ಬಂದು ಬಡಿದಾಗ್ ನಾವೆಲ್ಲ ಒಂದು ಕ್ಷಣ ಥರ ಥರ ನಡಿಗಿದ್ವಿ . ನಮ್ಮ ಶಾಲೆಯ ಕನ್ನಡ ಟೀಚರ್ ಪೇಪರ್ ಹಿಡ್ಕೊಂಡು ನಮ್ಮ ಕ್ಲಾಸಿಗೆ ಬಂದಾಗ್ ಅದು ಎನು ಅಂತ ಎಲ್ಲರಿಗೂ ಕೂತೂಹಲ . ಅವರು ತುಂಬಾನೆ ಫೀಲ್ ಮಾಡ್ಕೊಂಡಿರೋ ಹಾಗೆ ಕಾಣಿಸ್ತಾ ಇತ್ತು . ಅವರು ಪೇಪರ್ ಹಿಡ್ದು ಮೊದ್ಲು ಹೇಳಿದ್ದು " ಈ ಪೇಪರನಲ್ಲಿ ಸುದ್ದಿ ಬಂದಿದೆ , ನಮ್ಮ ನಿಮ್ಮೆಲ್ಲರ ಆತ್ಮಿಯ ಗೆಳತಿ ಅನ್ನಪೂರ್ಣ ಕರ್ಬನ್ನವರ್ ನಮ್ಮನ ಬಿಟ್ಟು ಹೊರಟು ಹೋದಳು. ಅವಳು ಆತ್ಮಹತ್ಯೆ ಮಾಡಿಕೊಂಡಿದಾಳೆ " ಅಂದಾಗ್ ನನ್ನ ಎದೆ ಒಡದೆ ಹೋಯ್ತು ಅನ್ನೋವಸ್ಟು ನೋವಾಯ್ತು , ತೀವ್ರ ಶಾಕ್ ಆಯಿತು . ಏನ್ ಕೇಳ್ತಾ ಇದ್ದೀನಿ ಅಂತಾನೆ ನಂಬೋಕೆ ಆಗಲಿಲ್ಲ . ಈ ಸದ್ಯ ನಾನು ಇದನ್ನ ಬರಿಬೇಕಾದ್ರೆ ನಂಗೆ ಅದೇ ಥರ ಎದೆ ಡವ್ ಡವ್ ಅಂತ ಹೊಡ್ಕೊಳ್ತಾ ಇದೆ. ಅವರು ವಿವರಿಸಿದ ಪ್ರಕಾರ ಅವಳ್ಳನ್ನ ದೇವದಾಸಿ ಆಗೋಕೆ ಒತ್ತಾಯ ಮಾಡಿದರಂತೆ . ಅವಳು ಅದಕ್ಕೆ ಸುಮಾರು ದಿನ ಖಂಡಿಸಿ ಜಗಳಾದ್ಲು ಅಂತೆ . ಆಮೇಲೆ ಓಣಿಯ ಹಿರಿಯರು ಅಂದ್ರೆ ಪಿಂಪ್ಗಳೇ ಇರ್ಬೇಕು ಅವರ ಅಪ್ಪ, ಅಮ್ಮನ ಮೇಲೆ ಒತ್ತಾಯ ಹೇರಿ ದೇವದಾಸಿ ಮುತ್ತು ಕಟ್ಟೋಕೆ ರೆಡಿನು ಮಾಡಿಸಿದರಂತೆ . ಅಮೆಲೇನೆ ಅವಳು ಈ ಥರ ಅತ್ಮಹತ್ಯೇ ಮಾಡಿಕೊಂಡಿದ್ದು ಅಂತೆ . ಒಂದು ಕ್ಷಣ ನಾವೆಲ್ಲರೂ ಮೂಕವೇದನೆ ಅನಿಭವಿಸಿದ್ವಿ ನೋಡಿ ಅದನ್ನ್ ಹೇಳೊಕೆ ಅಗೋಲ್ಲಾ . ನಂಗೆ ನನ್ನ ಜೀವನದಲ್ಲಿ ಮೊದಲ ಬಾರಿಗೆ ಅಸಾಯಕತೆ ಫೀಲ್ ಆಯಿತು. ನಮ್ಮ ಟೀಚರ್ ಕೊನೆಗೊಂದು ಮಾತು ಹೇಳಿದ್ರು , ಅದು ಏನಂದ್ರೆ " ಅವಳು ಆ ಥರ ಜೀವನ ಮಾಡೋದ್ ಕಿಂತ್ಲು , ಅವಳು ಈ ಥರ ಅತ್ಮಹತ್ಯೇ ಮಾಡಿ ಕೊಂಡಿದ್ದು ಒಳ್ಳೆಯದೇ ಆಯಿತು " . ನನಗ್ಯಾಕೋ ಅವರು ಆ ಥರ ಹೇಳಬಾರದಾಗಿತ್ತೇನೋ ಅಂತ ಇಂದಿಗೂ ಅನ್ನಿಸ್ತಾ ಇರ್ತದೆ . ಅದನ್ನ ಬಿಟ್ಟು ನಮಗೆಲ್ಲ " ಅವಳು ಇಷ್ಟಕ್ಕೆಲ್ಲ ತನ್ನ ಜೀವ ಕೊಡದೆ ಫೈಟ್ ಮಾಡಬೇಕಿತ್ತು, ಇಲ್ಲ ನಮ್ಮ ಹತ್ರ ಬರಬೇಕಿತ್ತು " ಅಂತ ಹೇಳಿದ್ರೆ ನಮಗೆ ಜೀವನದ್ದಲಿ ಕಷ್ಟ ಬಂದ್ರೆ ಹೆದರಿ ಜೀವ ಕೊಡದೆ ಫೈಟ್ ಮಾಡಬೇಕು ಅಂತ ದೈರ್ಯ ಕೊಟ್ಟಂಗೆ ಇರ್ತಿತ್ತೇನೋ . ಅದ್ರು ನಂಗೆ ಇನ್ನು ಅನ್ನಿಸುತ್ತೆ " ಅವಳು ಹೀಗೆ ಮಾಡಿದ್ದು ಸರೀನಾ ?" .ಯಾರಿಗೊತ್ತು ಹದಿಮೂರು ವರ್ಷದ ಹುಡುಗಿಗೆ ಅದನ್ನು ಬಿಟ್ಟು ಬೇರೆ ದಾರಿ ಇಲ್ಲ ಅನ್ನಿಸಿರಬೇಕು ಅಲ್ವಾ ?

ನಾ ಇಲ್ಲಿ ಯಾಕೆ ಅಂದ್ರೆ ...

ನಾ ಇಲ್ಲಿ ಯಾಕೆ ಅಂದ್ರೆ..
ನನ್ನ ಮನಸ್ಸಿಗೆ ತೋಚಿದ್ದು ಗೀಚೋಕೆ,
ನನ್ನ ನಗು , ನಿಮ್ಮ ಕಷ್ಟ ಹಂಚಿಕೊಲೋಕೆ
ಸ್ವಲ್ಪ ನಿಮ್ಮ ತಲೆ ತಿನ್ನೋಕೆ
ನಿಮ್ಮ ಮನಸಿಗೆ ಮುದ ನೀಡೋ ಪೋಸ್ಟ್ ಬರಿಯೋಕೆ
ನಿಮ್ಮ ಮನರಂಜಿಸೋಕೆ
ನನ್ನದೊಂದು ಪುಟ್ಟ ಏಕಾಂತ್ ಲೋಕ ಸೃsTisoke
ನಾ ಇಲ್ಲಿ ಯಾಕೆ ಅಂದ್ರೆ ....